ಪ್ರಧಾನಿ ಮೋದಿಯವರು ಸಿಎಂ ಬಿಎಸ್.ವೈಗೆ ನೀಡಿದ ಸಲಹೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ಸಾಕಷ್ಟು ಶ್ರಮ ವಹಿಸಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದರ ನಡುವೆಯೂ ಕೂಡ ಸೋಂಕು ಕೈಮೀರಿ ಇಡೀ ದೇಶದಾದ್ಯಂತ ಹರಡುತ್ತಿದೆ. ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ ಅಷ್ಟಕ್ಕೂ ಪ್ರಧಾನಿ ಮೋದಿಯವರು ಯಡಿಯೂರಪ್ಪನವರಿಗೆ ನೀಡಿದ ಸೂಚನೆ ಏನು? ಈ ಬಗ್ಗೆ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಕೋವಿಡ್-19 ವಿರುದ್ಧದ ಯುದ್ಧ ಸುದೀರ್ಘವಾದುದು. ಲಾಕ್ಡೌನ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಲಾಕ್ಡೌನ್ ವಿಫಲವಾದರೆ ಅದಕ್ಕೆ ಮುಖ್ಯಮಂತ್ರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ವಿಡಿಯೊ ಕಾನ್ಫರೆನ್ಸ್ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಲಾಕ್ಡೌನ್ ಅವಧಿಯಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ತಿಳಿಸಿದ್ದಾಗಿ ಯಡಿಯೂರಪ್ಪ ಮಾಹಿತಿ ನೀಡಿದರು.
ಕೊರೊನಾ ವೈರಸ್ ಸೋಂಕಿತರ ಆರೈಕೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಬೇಕು. ಮುಂದಿನ ದಿನಗಳಲ್ಲಿ ಒಂದು ವೇಳೆ ಪರಿಸ್ಥಿತಿ ವಿಷಮಿಸಿದರೆ ವೈದ್ಯರ ಕೊರತೆಯಾಗದಂತೆ ಎಚ್ಚರವಹಿಸಬೇಕು. ಆಸಕ್ತ ವೈದ್ಯರಿಗೆ ಆನ್ಲೈನ್ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಪ್ರಧಾನಿ ಸೂಚಿಸಿದ್ದಾಗಿ ಯಡಿಯೂರಪ್ಪ ಹೇಳಿದರು.
ಕೊರೊನಾ ವೈರಸ್ ವಿರುದ್ಧ ದೇಶ ಸುದೀರ್ಘ ಯುದ್ಧ ನಡೆಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಪ್ರಧಾನಿ ಹೇಳಿದ್ದಾಗಿ ಯಡಿಯೂರಪ್ಪ ನೆನಪಿಸಿಕೊಂಡರು.
’ಎಲ್ಲ ಧರ್ಮಗಳ ಸಹಕಾರ ಕೋರುತ್ತಿದ್ದೇನೆ. ಏಪ್ರಿಲ್ ೧೪ರ ಒಳಗೆ ಯಾವುದೇ ಅನಾಹುತವಾಗದಂತೆ ಕಟ್ಟೆಚ್ಚರವಹಿಸುತ್ತೇವೆ’ ಎಂದು ಯಡಿಯೂರಪ್ಪ ತಿಳಿಸಿದರು.
ಮೋದಿ ಸೂಚನೆಗಳಿವು...
* ಅಗತ್ಯ ವಸ್ತುಗಳ ಪೂರೈಕೆಗೆ ಅಡಚಣೆಯಾಗದಂತೆ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ.
* ನಿರ್ಬಂಧ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ
* ವಲಸೆ ಕಾರ್ಮಿಕರನ್ನು ಪ್ರತ್ಯೇಕವಾಗಿರಿಸಿ, ಅವರಿಗೆ ಎಲ್ಲ ಅಗತ್ಯ ಸೌಲಭ್ಯ ಒದಗಿಸಿ
* ಕರ್ನಾಟಕದಲ್ಲಿ ಈ ವರೆಗೆ 124 ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ 9ನೇ ಸ್ಥಾನದಲ್ಲಿದೆ. ಅಗತ್ಯ ಎಚ್ಚರಿಕೆ ವಹಿಸಿ
* ಕೋವಿಡ್ 19 ಸೋಂಕಿನಿಂದಾಗಿ ಜಾಗತಿಕ ಮಟ್ಟದಲ್ಲಿಯೇ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಎಲ್ಲರೂ ಒಟ್ಟಾಗಿ ಪರಿಣಾಮಕಾರಿಯಾಗಿ ನಿರ್ವಹಿಸೋಣ
* ಔಷಧ, ಆಹಾರ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆ ಅಬಾಧಿತವಾಗಿರಬೇಕು
* ಕೋವಿಡ್ 19 ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ಅಧಿಸೂಚಿಸಿ, ಜನರಿಗೆ ಈ ಕುರಿತು ಮಾಹಿತಿ ಒದಗಿಸಿ
* ಮುಂದಿನ ದಿನಗಳಲ್ಲಿ ವೈದ್ಯರ ಕೊರತೆಯಾಗದಂತೆ, ಸಾಧ್ಯವಿರುವಲ್ಲೆಲ್ಲಾ ಆಯುಷ್ ವೈದ್ಯರ ಸೇವೆಯನ್ನು ಪಡೆದುಕೊಳ್ಳಿ. ಆನ್ಲೈನ್ ತರಬೇತಿ ಕೊಡಿ
* ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಗಳನ್ನು ಜನಪ್ರಿಯಗೊಳಿಸಿ, ಜನರು ಅವುಗಳನ್ನು ಪಾಲಿಸಲು ಕ್ರಮ ವಹಿಸಿ
* ಪಿಎಂ-ಗರೀಬ್ ಕಲ್ಯಾಣ್ ಪ್ಯಾಕೇಜ್ನ ಧನ ಸಹಾಯದ ಮೊತ್ತವನ್ನು ಪಡೆಯಲು ಬ್ಯಾಂಕುಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸಿ
* ಕೃಷಿ ಚಟುವಟಿಕೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ. ಆದರೆ ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯಬಾರದು. ಬೆಳೆ ಕಟಾವು ಸಂದರ್ಭದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ.