ಮೈಸೂರು: ಸಿಎಂ ಯಡಿಯೂರಪ್ಪ ಹೀಗೆ ಕೆಲಸ ಮಾಡದಿದ್ದರೆ ಜನ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂಡ್ಡ ತಿರುಗೇಟು ನೀಡಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಯಡಿಯೂರಪ್ಪ ಆರು ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಅಸಲೀ ಬಣ್ಣ ಬಯಲು ಮಾಡುತ್ತೇನೆ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ 5ವರ್ಷ, ಎಚ್.ಡಿ.ಕುಮಾರಸ್ವಾಮಿ 1.5ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ್ದಾರೆ. ಆದರೆ, ರಾಜ್ಯದ ಜನರಿಗಾಗಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ನಮ್ಮ ಸರಕಾರ ರಚನೆಯಾಗಿ 7ತಿಂಗಳಾಗಿದೆ. ರಾಜ್ಯದ ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಕ್ರಮ ತಿಳಿಯಲು ಇನ್ನು 5-6 ತಿಂಗಳ ಸಮಯದ ಅಗತ್ಯವಿದೆ. ಆಗಲೇ ಪ್ರಶ್ನೆ ಮಾಡುತ್ತಿದ್ದೀರಿ ಎಂದು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ 6 ತಿಂಗಳ ನಂತರ ಜನ ಬಡಿಗೆ ತೆಗೆದುಕೊಂಡು ನಿಮಗೆ ಹೊಡಿತಾರೋ ನಮಗೆ ಹೊಡಿತಾರೋ ಎಂಬುದು ಗೊತ್ತಾಗುತ್ತೆ. ಸಿದ್ದರಾಮಯ್ಯ ಮುಂದಿನ 6 ತಿಂಗಳು ಕಾಯಲಿ, ಅವರ ಬಣ್ಣ ಬಯಲಾಗುತ್ತದೆ. ಅಲ್ಲಿಯವರೆಗೂ ಜಸ್ಟ್ ವೇಟ್ ಅಂಡ್ ಸೀ ಎಂಬರ್ಥದಲ್ಲಿ ತಾಳ್ಮೆಯಿಂದ ಇರಲಿ ಎಂಬ ಸಲಹೆ ನೀಡಿದರು.
ಮಹದಾಯಿ ಯೋಜನೆಯ ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಈ ನಿಟ್ಟಿನಲ್ಲಿ ರಾಜ್ಯಕ್ಕೆ ನ್ಯಾಯ ಸಮ್ಮತವಾದ ರೀತಿಯಲ್ಲಿ ಆದೇಶ ನೀಡಿರುವುದು ಖುಷಿ ಕೊಟ್ಟಿದೆ. ಹಾಗಾಗಿ ಈ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಬೇಕಾದ ಅನುದಾನವನ್ನು ಕಾಯ್ದಿರಿಸುವುದು ನನ್ನ ಮೊದಲ ಆದ್ಯತೆ ಎಂದರು. ಮಾರ್ಚ್ 5ರಂದು ಬಜೆಟ್ ಮಂಡನೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಮಾರ್ಚ್ 3 ರೊಳಗೆ ಅದಕ್ಕೊಂದು ರೂಪ ನೀಡಲಾಗುವುದು ಎಂದು ಮತ್ತೊಮ್ಮೆ ನೀರಾವರಿಗೆ ತಮ್ಮ ಆದ್ಯತೆ ಎಂಬುದನ್ನು ಪುನರ್ ಉಚ್ಚರಿಸಿದರು.
ಇತ್ತ ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರೆ, ಅತ್ತ ಬಿ.ಎಸ್.ವೈ ಪುತ್ರ ಬಿ.ವೈ.ವಿಜಯೇಂದ್ರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದು, ವಿಶೇಷವಾಗಿತ್ತು. ಬಿ.ಎಸ್.ವೈ ಅವರ 78ನೇ ಜನ್ಮದಿನವನ್ನು ಫೆಬ್ರವರಿ 27ರಂದು ನಡೆಸಲಾಗುವುದು.