ನವದೆಹಲಿ: ರಾಷ್ಟ್ರಾದ್ಯಂತ ಪೌರತ್ವದ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಂತರ್ಜಲದ ಬಗ್ಗೆ ಒಂದು ವಿಷಯವಾಗಿ ರಾಷ್ಟ್ರದ ಬೆನ್ನೆಲುಬು ರೈತರಲ್ಲಿ ಒಂದು ಮನವಿ ಮಾಡಿದ್ದಾರೆ. ಹೌದು, ಅದೇನು ಗೊತ್ತಾ!?
ಪ್ರಧಾನಿ ನರೇಂದ್ರ ಮೋದಿ ಮಾತನಾಡಿರುವದು, ರೈತರಲ್ಲಿ ಮನವಿ ಸಲ್ಲಿಸಿರುವುದು ಅಂತರ್ಜಲದ ಬಗ್ಗೆ. ಹೌದು, ದೇಶದ ಅಂತರ್ಜಲ ಮಟ್ಟ ಕಾಪಾಡುವಲ್ಲಿ ರೈತರೂ ಕೈ ಜೋಡಿಸ ಬೇಕು. ಕಡಿಮೆ ನೀರು ಪಡೆಯುವ ಕೃಷಿಪದ್ಧತಿಗಳನ್ನು ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವಂಥ ಬೆಳೆಗಳನ್ನು ಬೆಳೆವ ಮೂಲಕ ಅಂತರ್ಜಲ ಸಂರಕ್ಷಣೆಗೆ ಕಾಣಿಕೆ ನೀಡಬೇಕು ಎಂದು ದೇಶದ ರೈತರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಅವರ 95 ನೇ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರ ಜಾರಿ ಗೊಳಿಸಿದ ಅಟಲ್ ಜಲ ಯೋಜನೆಯನ್ನು ಲೋಕಾರ್ಪಣೆ ಗೊಳಿಸಿ ಅವರು ಮಾತ ನಾಡಿದರು. ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿದಿರುವ ಕರ್ನಾಟಕ ಸೇರಿ 7 ರಾಜ್ಯಗಳ ಸುಮಾರು 8,300 ಹಳ್ಳಿಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.
ರೈತರು ತಮ್ಮಲ್ಲಿನ ಪುರಾತನ ಕೃಷಿ ಪದ್ಧತಿ ಕೈಬಿಟ್ಟು, ಹೊಸ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಕಬ್ಬನ್ನು ಬೆಳೆವ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚು ಕುಸಿದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಕಬ್ಬು ಬೆಳೆಯುವ ರೈತರು ಮಳೆ ಕೊಯ್ಲು, ಸೂಕ್ಷ್ಮ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಕಬ್ಬಿನ ಬದಲು ಇತರ ಲಾಭದಾಯಕ ವಾಣಿಜ್ಯ ಬೆಳೆ ಆಯ್ಕೆ ಮಾಡಿದರೆ ಉತ್ತಮ ಎಂದು ತಿಳಿಸಿದರು.
ಇದೇ ವೇಳೆ, ನೀರಿನ ಸಂಪರ್ಕವಿಲ್ಲದ 18 ಕೋಟಿ ಮನೆಗಳಲ್ಲಿ 3 ಕೋಟಿ ಮನೆಗಳಿಗಷ್ಟೇ 70 ವರ್ಷಗಳಲ್ಲಿ ನೀರಿನ ಸಂಪರ್ಕ ನೀಡಲಾಗಿತ್ತು. ಜಲ ಜೀವನ ಮಿಷನ್ ಮೂಲಕ 15 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದರು. ಪ್ರಧಾನಿ ಮೋದಿ ಅಟಲ್ ಬಿಹಾರಿ ಅವರ ಶಿಷ್ಯರಾಗಿದ್ದು, ಇದೀಗ ಅಜಾತಶತ್ರು ಅಟಲ್ ಅವರ ಹೆಸರಿನಲ್ಲೇ ಯೋಜನೆ ಪ್ರಾರಂಭಿಸಲಾಗಿದೆ.