ನವದೆಹಲಿ: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಇತ್ತೀಚೆಗಷ್ಟೇ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿ, ಪ್ರಕಟಗೊಳಿಸಿತ್ತು. ಆದರೆ ಪ್ರಸ್ತುತ ಸುಪ್ರೀಂ ಕೋರ್ಟ್ ವಿಧಾನಸಭಾ ಉಪಚುನಾವಣೆಗೆ ತಡೆ ನೀಡಿ, ಆದೇಶ ಹೊರಡಿಸಿದೆ.
ಉಪ ಚುನಾವಣೆಗೆ ತಡೆ ನೀಡ ಬೇಕು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅನರ್ಹರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಉಪ ಚುನಾವಣೆಗೆ ತಯಾರಿ ನಡೆಸಿದ್ದ ವಿಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ. ಅನರ್ಹರ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿ ಕೋರ್ಟ್ ಆದೇಶಿಸಿದೆ.
ಅನರ್ಹರ ಅರ್ಜಿ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಒಮ್ಮತದ ನಿಲುವು ಪಡೆಯುವ ಅಗತ್ಯ ಇದೆ ಎಂದು ಹೇಳಿತು. ಮಧ್ಯಂತರ ಆದೇಶ ನೀಡುವುದು ಒಳ್ಳೆಯದಲ್ಲ. ಸಂಪೂರ್ಣ ವಿಚಾರಣೆ ಮುಗಿಸಿ ಒಂದೇ ಆದೇಶವನ್ನ ನೀಡಿದರೆ ಉತ್ತಮ. ಹೀಗಾಗಿ ಚುನಾವಣೆಗೆ ಸ್ಟೇ ನೀಡಿದರೆ ಹೇಗೆ ಅನ್ನೋ ಇಂಗಿತವನ್ನ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದರು.
ಆಗ ಚುನಾವಣಾ ಅಧಿಕಾರಿಗಳು ಸುಪ್ರೀಂಕೋರ್ಟ್ ನಿರ್ಣಯಕ್ಕೆ ತಲೆಬಾಗಿ, ಅಕ್ಟೋಬರ್ 21ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನ ನಾವು ನಡೆಸುವುದಿಲ್ಲ. ಜೊತೆಗೆ ಕರ್ನಾಟಕದಲ್ಲಿನ ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗುವವರೆಗೂ ಚುನಾವಣೆ ನಡೆಸಲ್ಲ ಅಂತಾ ಕೋರ್ಟ್ಗೆ ತಿಳಿಸಿದರು. ನಂತರ ಸುಪ್ರೀಂಕೋರ್ಟ್, ಉಪಚುನಾವಣೆಗೆ ತಡೆ ನೀಡಿದೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸುಪ್ರೀಂ ಕೋರ್ಟ್ ಆದೇಶದವರೆಗೂ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವಂತಿಲ್ಲ.
ಈಗಾಗಲೇ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ಪಕ್ಷಗಳಿಗೆ ಇದೀಗ ಇನ್ನಡೆಯಾಗಿದೆ. ಆದರೆ ಅನರ್ಹರ ಶಾಸಕರ ಪ್ರಕರಣ ಮುಗಿಯುವ ವರೆಗೂ ಚುನಾವಣೆ ನಡೆಸುವುದಿಲ್ಲ ಎಂದು ಹೇಳಿರುವುದರಿಂದ ಅನರ್ಹರು ಮುಂದೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸ ಬಹುದ ಅಥವಾ ಅಲ್ಲವಾ ಎಂದು ಸ್ಪಷ್ಟವಾಗಿ ನಿರ್ಧಾರವಾಗಲಿದೆ. ಪ್ರಸ್ತುತ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ ಮುಂದೇನಾಗುತ್ತದೆ ಎಂಬುದು ತಿಳಿಯಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ರಾಜ್ಯ ಸರ್ಕಾರ ಮುಂದಿನ ಚುನಾವಣೆ ನಡೆಯುವ ವರೆಗೂ ಸೇಫ್ ಆದಂತೆ ಕಂಡು ಬರುತ್ತಿದೆ.