
ಮತ್ತೊಮ್ಮೆ ಮಾಧ್ಯಮಗಳ ಮೇಲೆ ಮುನಿಸಿಕೊಂಡ ಸಿಎಂ ಕುಮಾರಸ್ವಾಮಿ!
ಅದ್ಯಾಕೋ ಮಾಧ್ಯಮಗಳಿಗೂ ನಮ್ಮ ಸಿಎಂ ಕುಮಾರಸ್ವಾಮಿಗೂ ಸರಿ ಬರುತ್ತಿಲ್ಲ. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮೇಲೆ ಮತ್ತೊಮ್ಮೆ ಮುನಿಸಿಕೊಂಡಿದ್ದಾರೆ. ಹೌದು, ಎಚ್.ಡಿ.ಕುಮಾರಸ್ವಾಮಿ ಉಪಚುನಾವಣೆ ಪ್ರಯುಕ್ತ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದರು.
ಅಷ್ಟಕ್ಕೂ ಇದೇನೂ ಮೊದಲೇನಲ್ಲ. ಈ ಹಿಂದೆಯೂ ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದರು. ಅಲ್ಲದೇ ಮಾಧ್ಯಮದವರನ್ನು ಹತ್ತಿರ ಬಿಡದಂತೆ ಅವರು ತಮ್ಮ ಬೆಂಗಾವಲು ಪಡೆ ಸಿಬ್ಬಂದಿಗೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಜೊತೆಗೆ ಜೆ.ಪಿ.ನಗರದ ಅವರ ನಿವಾಸದ ಬಳಿಯೂ ಯಾವುದೇ ಮಾಧ್ಯಮಗಳನ್ನು ಪೊಲೀಸರು ಬಿಡುತ್ತಿಲ್ಲ.
ಅಷ್ಟಕ್ಕೂ ಸಿಎಂ ಕುಮಾರಸ್ವಾಮಿ ಹೀಗೆಕೆ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರವಂತೂ ಸಿಕ್ಕಿದೆ. ಹೌದು, ಮೇ 23ರ ತನಕ ಮಾಧ್ಯಮಗಳ ಜೊತೆ ಮಾತನಾಡಬೇಡಿ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಸಿಎಂಗೆ ಸಲಹೆ ನೀಡಿದ್ದಾರಂತೆ. ಬೆಂಗಳೂರಿನಲ್ಲಿ ಕಳೆದ ವಾರ ಕುಮಾರಸ್ವಾಮಿ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿದ್ದರು. ಆಗ ಈ ಸೂಚನೆ ಸಿಕ್ಕಿದೆಯಂತೆ ಎನ್ನಲಾಗುತ್ತಿದೆ.