ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ನೀಡಿದ ಮಾರ್ಗಸೂಚಿ ಏನು..?

Soma shekhar
ಕೊರೋನಾ ವೈರಸ್ ಇಂದಾಗಿ ಇಡೀ ದೇಶದಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೂ ಕೂಡ ವಾರ್ಷಿಕ ಪರೀಕ್ಷೆಗಳನ್ನು ನಡೆಸದೇ ರಜೆಯನ್ನು ನೀಡಲಾಗಿತ್ತು. ಇದರಿಂದ ಶಾಲಾ ಕಾಲೇಜು ಮಕ್ಕಳು ತಮ್ಮ ಶಾಲಾ ಶಿಕ್ಷಣದ ಕೊರತೆಯನ್ನು ಎದುರಿಸಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವಂತಹ ಹಿನ್ನಲೆ ಯಲ್ಲಿ ಮತ್ತೆ ಶಾಲಾ ಕಾಲೇಜುಗಳನ್ನು ಆರಂಭಿಸಲು ಚಿಂತನೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಶಾಲಾ ಕಾಲೇಜುಗಳ ಆರಂಭಕ್ಕೆ ಮಾರ್ಗಸೂಚಿಯನ್ನು ಬಿಡುಗಡೆಯನ್ನು ಮಾಡಲಾಗಿದೆ.



ಹೌದು ಕೊರೊನಾ ಆತಂಕದ ನಡುವೆ ಶಾಲಾ-ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸೆ.21ರಿಂದ 9 ರಿಂದ 12ನೆ ತರಗತಿ ವರೆಗಿನ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಖಾಸಗಿ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಾಲೆಗಳ ಆರಂಭಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಮೇಲೆ ಶಾಲಾ-ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಆರೋಗ್ಯ ಇಲಾಖೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಮಾರ್ಗಸೂಚಿ ಸಿದ್ಧಪಡಿಸಿದೆ.



ಮಕ್ಕಳು ಶಾಲೆಗೆ ಕಡ್ಡಾಯವಾಗಿ ಬರುವಂತೆ ಒತ್ತಾಯ ಮಾಡುವಂತಿಲ್ಲ. ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಯೂ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಬೇಕು. ಪ್ರತಿದಿನ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು. ಮಕ್ಕಳು ಹಾಗೂ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ಪ್ರತಿ ಕೊಠಡಿಗಳನ್ನೂ ನಿತ್ಯ ಸ್ಯಾನಿಟೈಜ್ ಮಾಡಬೇಕು. ಮಕ್ಕಳು ಶಾಲಾ ಆವರಣದಲ್ಲಿ ಗುಂಪು ಕಟ್ಟದಂತೆ ಎಚ್ಚರ ವಹಿಸಬೇಕು.



ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಆಟ, ಊಟ, ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಲೈಬ್ರರಿಯಲ್ಲಿ ಹೆಚ್ಚು ಮಕ್ಕಳು ಸೇರುವಂತಿಲ್ಲ. ಗುಂಪು ಕ್ರೀಡೆಗೆ ಅವಕಾಶವಿಲ್ಲ. ಮಕ್ಕಳು ಶಾಲೆಗೆ ಬರುವಾಗ, ಹೋಗುವಾಗ ಸಾಮಾಜಿಕ ಅಂತರದಲ್ಲಿರುವಂತೆ ಕ್ರಮ ವಹಿಸುವುದು, ಶಾಲಾ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದೆ.



ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದ್ದು, ಸೆ.21 ರಿಂದ 9 ರಿಂದ 12ನೆ ತರಗತಿ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ತೆರಳಬಹುದು ಹಾಗೂ ಈವರೆಗೆ ಆನ್‍ಲೈನ್ ಶಿಕ್ಷಣದಲ್ಲಿ ಆದ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಹಂತ ಹಂತವಾಗಿ ಉಳಿದ ತರಗತಿಗಳ ಪ್ರಾರಂಭಕ್ಕೂ ಕೂಡ ಸರ್ಕಾರ ಚಿಂತನೆ ನಡೆಸಿದೆ.




ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ಬಹುತೇಕ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ. ಆದರೆ, ಸರ್ಕಾರಿ ಶಾಲೆಗಳ ಗತಿ ಏನು? ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜ್ ಮಾಡುವುದು, ಶೌಚಾಲಯಗಳ ಶುಚಿತ್ವ, ಶಾಲಾ ನೈರ್ಮಲ್ಯೀಕರಣ ಮಾಡುವ ಮೂಲಕ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು.

Find Out More:

Related Articles: