ಬೆಂಗಳೂರು: ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಹೌದು ಕರುನಾಡಿದು, ಇಲ್ಲಿ ಎಲ್ಲವೂ ಕನ್ನಡಮಯ. ಈಗಂತ ನಾನು ಹೇಳುತ್ತಿಲ್ಲ. ಪರಭಾಷಾ ಚಿತ್ರನಟಿಯೊಬ್ಬರು ಹೇಳಿದ್ದಾರೆ. ಹೌದು ಅದು ಯಾರು? ಏನಿದು ಪರ ಭಾಷೆಯಲ್ಲೂ ಕನ್ನಡದ ಕಂಪು ಎನ್ನುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಆದರೆ ಇಲ್ಲೊಬ್ಬರು ನಟಿ ಮೊದಲ ಸಿನಿಮಾದಲ್ಲೇ, ಅದೂ ಸಿನಿಮಾ ಶುರುವಾತಿನಲ್ಲೇ ಕನ್ನಡ ಕಲಿಯಲು ಆರಂಭಿಸಿದ್ದಾರೆ. ಹೌದು.. ‘ಮುಗಿಲ್ಪೇಟೆ’ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ನಟಿ ಖಯಾದು ಲೋಹರ್ ಇದೀಗ ‘ಕನ್ನಡವೇ ನಿತ್ಯ’ ಎನ್ನುತ್ತಿದ್ದಾರೆ. ಅರ್ಥಾತ್ ಅವರೀಗ ಪ್ರತಿನಿತ್ಯ ಕನ್ನಡ ಕಲಿಯುತ್ತಿದ್ದಾರೆ. ಮನುರಂಜನ್ ರವಿಚಂದ್ರನ್ ನಾಯಕರಾಗಿರುವ ಭರತ್ ನಾವುಂದ ನಿರ್ದೇಶನದ ‘ಮುಗಿಲ್ಪೇಟೆ’ ಸಿನಿಮಾಗೆ ಅಸ್ಸಾಮಿ ಬೆಡಗಿ ಖಯಾದು ಲೋಹರ್ ನಾಯಕಿ.
ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗಷ್ಟೇ ಅಲ್ಲ ಬೆಂಗಳೂರಿಗೇ ಪ್ರಥಮ ಬಾರಿಗೆ ಆಗಮಿಸಿರುವ ಖಯಾದು ಈಗಾಗಲೇ ಕನ್ನಡ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಆಡಿಷನ್ಗೆ ಕರೆಸಿದ 80ಕ್ಕೂ ಅಧಿಕ ಪ್ರತಿಭೆಗಳ ಪೈಕಿ ಖಯಾದು ಈ ಪಾತ್ರಕ್ಕೆ ಸೂಕ್ತ ಎನಿಸಿದ್ದರಿಂದ ಆಯ್ಕೆ ಮಾಡಿದೆವು. ಸದ್ಯ ಸಿನಿಮಾಗಾಗಿ ಅವರಿಗೆ ಬೆಂಗಳೂರಿನಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿನಿತ್ಯ ಬೆಳಗ್ಗೆ 2 ಗಂಟೆ ಕನ್ನಡ ಅಭ್ಯಾಸ ಮಾಡಿಸಲಾಗುತ್ತಿದೆ’ ಎನ್ನುತ್ತಾರೆ ನಿರ್ದೇಶಕ ಭರತ್ ನಾವುಂದ.
ನಾನು ಅಸ್ಸಾಮ್ವಳಾದರೂ ಸದ್ಯ ಪುಣೆಯಲ್ಲಿ ವಾಸವಿದ್ದೇವೆ. ಈಗಾಗಲೇ ಒಂದು ಮರಾಠಿ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಅದಿನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಪ್ರಯತ್ನಿಸುತ್ತಿದ್ದಾಗ ನನಗೆ ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಮೊದಲ ಅವಕಾಶ ಸಿಕ್ಕಿತು. ಇಲ್ಲಿನ ಭಾಷೆ ಸ್ವಲ್ಪ ಕಷ್ಟವಾದರೂ ಕಲಿಯಬೇಕು ಎಂಬ ಬಯಕೆ ಇದೆ. ಹೀಗಾಗಿ ದಿನಾ ಕನ್ನಡ ಕಲಿಯುತ್ತಿದ್ದು, ಸಿನಿಮಾ ಬಿಡುಗಡೆ ಆಗುವುದರೊಳಗೆ ತಕ್ಕಮಟ್ಟಿಗೆ ಕನ್ನಡ ಮಾತನಾಡಬೇಕು ಅಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ರಕ್ಷಾ ಅವರ ನಿರ್ವಣದಲ್ಲಿ ಮೂಡಿ ಬರಲಿರುವ ಈ ಸಿನಿಮಾಗೆ ನ. 15ರಂದು ಮುಹೂರ್ತ ಆಗಿದ್ದು, ನ. 28ರಂದು ಶೂಟಿಂಗ್ ಆರಂಭವಾಗಲಿದೆ.