ಸುರಕ್ಷಿತವಾಗಿ ಭೂಮಿಗೆ ಮರಳಿದ 'ಕ್ರೂ ಡ್ರ್ಯಾಗನ್ ಎಂಡವರ್' ಬಾಹ್ಯಾಕಾಶ ನೌಕೆ: ಈ ನೌಖೆ ಇಳಿದಿದ್ದು ಎಲ್ಲಿ ಗೊತ್ತಾ..?

Soma shekhar
ಸುಮಾರು ಒಂದು ದಶಕದ ಅವಧಿಯಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿರುವ ಅಮೆರಿಕದ ಮೊದಲ ಸಿಬ್ಬಂದಿಸಹಿತ ಬಾಹ್ಯಾಕಾಶ ನೌಕೆ 'ಕ್ರೂ ಡ್ರ್ಯಾಗನ್ ಎಂಡವರ್' ರವಿವಾರ ಸುರಕ್ಷಿತವಾಗಿ ಭೂಮಿಗೆ ಮರಳಿದೆ. ನೌಕೆಯು ಮೆಕ್ಸಿಕೊ ಕೊಲ್ಲಿಯಲ್ಲಿ ನೀರಿನ ಮೇಲೆ ಇಳಿದಿದೆ.



ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಮತ್ತು ಖಾಸಗಿ ಬಾಹ್ಯಾಕಾಶ ಕಂಪೆನಿ 'ಸ್ಪೇಸ್‌ಎಕ್ಸ್' ಜಂಟಿಯಾಗಿ ಕೈಗೊಂಡಿರುವ ಈ ಬಾಹ್ಯಾಕಾಶ ಕಾರ್ಯಕ್ರಮವು, ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಮತ್ತು ಅಲ್ಲಿಂದ ಹಿಂದಕ್ಕೆ ತರುವ ಸಾಮರ್ಥ್ಯ ಅಮೆರಿಕಕ್ಕೆ ಮತ್ತೊಮ್ಮೆ ಬಂದಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಅಮೆರಿಕದ ಬಾಹ್ಯಾಕಾಶ ನೌಕೆ 'ಸ್ಪೇಸ್ ಶಟಲ್'ಗೆ 2011ರಲ್ಲಿ ನಾಸಾವು ನಿವೃತ್ತಿ ಘೋಷಿಸಿದ ಬಳಿಕ, ಅಮೆರಿಕದ ನೆಲದಿಂದ ಗಗನಯಾನಿಗಳನ್ನು ಹೊತ್ತು ಯಶಸ್ವಿಯಾಗಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಮತ್ತು ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ಕರೆತಂದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ.



ಅದೂ ಅಲ್ಲದೆ, 1975ರ ಅಮೆರಿಕ-ರಶ್ಯ ಸಹಭಾಗಿತ್ವದ ಅಪೋಲೊ-ಸೋಯಝ್ ಬಾಹ್ಯಾಕಾಶ ಯೋಜನೆಯ ಬಳಿಕ, ಅಮೆರಿಕದ ಸಿಬ್ಬಂದಿಸಹಿತ ಬಾಹ್ಯಾಕಾಶ ನೌಕೆಯೊಂದು ನೀರಿನ ಮೇಲೆ ಭೂಸ್ಪರ್ಶ ಮಾಡಿರುವುದು ಇದೇ ಮೊದಲು. ಗಗನಯಾತ್ರಿಗಳಾದ ಡೌಗ್ ಹರ್ಲೇ ಮತ್ತು ಬಾಬ್ ಬೆಹಂಕನ್‌ರನ್ನು ಹೊತ್ತ 'ಕ್ರೂ ಡ್ರ್ಯಾಗನ್ ಎಂಡವರ್' ನೌಕೆಯು ಜಲಸ್ಪರ್ಶ ಮಾಡುತ್ತಲೇ, ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ರಕ್ಷಣಾ ಹಡಗುಗಳು ಅದರತ್ತ ಧಾವಿಸಿದವು. ಒಂದು ಹಡಗು ತನ್ನ ಕ್ರೇನ್ ಮೂಲಕ ತೇಲುತ್ತಿದ್ದ ಬಾಹ್ಯಾಕಾಶ ನೌಕೆಯನ್ನು ಮೇಲೆತ್ತಿ ತನ್ನ ಒಡಲಿಗೆ ತುಂಬಿಸಿಕೊಂಡಿತು.



ಜಲಸ್ಪರ್ಶದ ಸುಮಾರು ಒಂದು ಗಂಟೆ ಬಳಿಕ, ಗಗನಯಾನಿಗಳು ಬಾಹ್ಯಾಕಾಶ ನೌಕೆಯಿಂದ ಹೊರಬಂದು ಹೆಲಿಕಾಪ್ಟರ್ ಮೂಲಕ ತೀರ ತಲುಪಿದರು. ಬಳಿಕ ಅವರು ವಿಮಾನದ ಮೂಲಕ ಹ್ಯೂಸ್ಟನ್‌ಗೆ ತೆರಳಿದ್ದಾರೆ.   ''ನಾವು ಮಾನವ ಬಾಹ್ಯಾಕಾಶ ಯಾನದ ನೂತನ ಶಕೆಯೊಂದನ್ನು ಪ್ರವೇಶಿಸಿದ್ದೇವೆ. ಇಲ್ಲಿ ಇನ್ನು ಮುಂದೆ ಎಲ್ಲ ಯಂತ್ರೋಪಕರಣಗಳ ಖರೀದಿದಾರ, ಮಾಲೀಕ ಮತ್ತು ನಿರ್ವಾಹಕ ನಾಸಾ ಆಗಿರುವುದಿಲ್ಲ'' ಎಂದು ನಾಸಾ ಮುಖ್ಯಾಧಿಕಾರಿ ಜಿಮ್ ಬ್ರೈಡನ್‌ಸ್ಟೈನ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.


 

Find Out More:

Related Articles: