ರಾಸ್ ಟೇಲರ್ ಶತಕದಬ್ಬರ, ನೂತನ ದಾಖಲೆ

Soma shekhar
ಟಿ20 ಸರಣಿಯಲ್ಲಿ ಸತತ ಹೋರಾಟ ನೀಡಿಯೂ ಕೊನೆಯ ಹಂತದಲ್ಲಿ ಎಡವಿದ್ದ ಟೇಲರ್, ಕೊನೆಗೂ ಏಕದಿನದಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಭಾರತ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದ್ದು ಇದೀಗ ಟೇಲರ್ ನೂತನ ದಾಖಲೆ ಬರೆದಿದ್ದಾರೆ. 
 
ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ 5-0 ಅಂತರದ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಗಿತ್ತು. ಸರಣಿಯುದ್ಧಕ್ಕೂ ಉತ್ತಮ ಪ್ರದರ್ಶನ ನೀಡಿದ ಟೇಲರ್ ಅನುಕ್ರಮವಾಗಿ 54*, 18, 17, 24 ಹಾಗೂ 53 ರನ್ ಗಳಿಸಿದ್ದರು. ಆದರೆ ಫಿನಿಶಿಂಗ್ ಚತುರತೆಯನ್ನು ಮರೆತು ಬಿಟ್ಟಿದ್ದರು. ಇದೀಗ ತಮ್ಮದೇ ಬ್ಯಾಟಿಂಗ್ ಫೈನ್ ಟ್ಯೂನ್ ಮಾಡಿರುವ ಈ ಹಿರಿಯ ಬ್ಯಾಟ್ಸ್‌ ಮನ್, ಏಕದಿನದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅಲ್ಲದೆ ಇನ್ನು 11 ಎಸೆತಗಳು ಬಾಕಿ ಉಳಿದಿರುವಂತೆಯೇ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.  73 ಎಸೆತಗಳಲ್ಲೇ ಶತಕ ಬಾರಿಸಿದ ಟೇಲರ್ ಅಂತಿಮವಾಗಿ 84 ಎಸತೆಗಳಲ್ಲಿ 109 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಇವರಿಗೆ ಎಡಗೈ ಆರಂಭಿಕ ಹೆನ್ರಿ ನಿಕೋಲ್ಸ್ (78) ಹಾಗೂ ನಾಯಕ ಹಾಗೂ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‌ಮನ್ ಟಾಮ್ ಲೇಥಮ್ (69) ಅವರಿಂದಲೂ ಉತ್ತಮ ಬೆಂಬಲ ದೊರಕಿತು.
 
ಇದು ಏಕದಿನದಲ್ಲಿ ಕ್ರಿಕೆಟ್‌ನಲ್ಲಿ ಟೇಲರ್ ಬ್ಯಾಟ್‌ನಿಂದ ಸಿಡಿದ 21ನೇ ಶತಕವಾಗಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಕಿವೀಸ್ ಬ್ಯಾಟ್ಸ್‌ಮನ್ ಎಂದೆನಿಸಿರುವ ರಾಸ್ ಟೇಲರ್ ತಮ್ಮದೇ ದಾಖಲೆ ಉತ್ತಮಪಡಿಸಿದರು. ಅಂದ ಹಾಗೆ 229 ಏಕದಿನ ಪಂದ್ಯಗಳಲ್ಲಿ 48.48ರ ಸರಾಸರಿಯಲ್ಲಿ ಒಟ್ಟು 8485 ರನ್ ಪೇರಿಸಿದ್ದಾರೆ. ಇದರಲ್ಲಿ 21 ಶತಕ ಹಾಗೂ 50 ಅರ್ಧಶತಕಗಳು ಸೇರಿವೆ. ಮುಂದಿನ ಏಕದಿನ ಪಂದ್ಯದಲ್ಲೂ ಸಹ ಟೇಲರ್ ಅಬ್ಬರಿಸುವ ಮುನ್ಸೂಚನೆ ನೀಡಿದ್ದು, ಟೀಂ ಇಂಡಿಯಾ ಇದೀಗ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
 

Find Out More:

Related Articles: