
ಲಾಕ್ ಡೌನ್ ಇಂದಾಗಿ ಶಾಪಿಂಗ್ ಮಾಲ್ ಗಳಿಗೆ ಆದ ನಷ್ಟ ಎಷ್ಟು ಗೊತ್ತಾ..? ಇಲ್ಲಿದೆ ಕಂಪ್ಲೀಟ್ ರಿಪೊರ್ಟ್
ಕೊರೋನಾ ವೈರಸ್ ಇಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದಂತಹ ಸಂದರ್ಭದಲ್ಲಿ ಅತೀ ಹೆಚ್ಚು ಜನ ಸೇರುತ್ತಿದ್ದಂತಹ ಎಲ್ಲಾ ಶಾಪಿಂಗ್ ಮಾಲ್ ಗಳನ್ನು ಮುಚ್ಚಲಾಗಿತ್ತು. ಆದರೆ ಲಾಕ್ ಡೌನ್ 4.0ನಲ್ಲಿ ನಲ್ಲಿ ನೀಡಲಾದ ಸಡಿಲಿಕೆಯಿಂದ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿಯನ್ನು ನೀಡಲಾಗಿದೆ ಆದರೆ ಶಾಪಿಂಗ್ ಮಾಲ್ ಗಳನ್ನು ತೆರೆಯಲು ಯಾವುದೇ ರೀತಿಯ ಅನುಮತಿಯನ್ನು ನೀಡಲಾಗಿಲ್ಲ. ಇದರಿಂದಾಗಿ ಮಾಲ್ ಗಳು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ. ಹಾಗಾಗಿ ಮಾಲ್ ಗಳು ಸರ್ಕಾರಕ್ಕೆ ಕೆಲವು ಆರ್ಥಿಕ ನೆರವನ್ನು ನೀಡುವಂತೆ ಒತ್ತಾಯಿಸಲಾಗಿದೆ.
ಹೌದು ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 90 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದ್ದು ಸರ್ಕಾರ ರೆಪೊ ದರ ಕಡಿತ, ಇಎಂಐ ಪಾವತಿ ವಿಸ್ತರಣೆ ಜೊತೆಗೆ ಇನ್ನೂ ಹಲವು ಆರ್ಥಿಕ ನೆರವು ಕ್ರಮಗಳನ್ನು ಪ್ರಕಟಿಸಬೇಕು ಎಂದು ಶಾಪಿಂಗ್ ಸೆಂಟರ್ ಒಕ್ಕೂಟ ಒತ್ತಾಯಿಸಿದೆ.
ಶಾಪಿಂಗ್ ಮಾಲ್ ಉದ್ಯಮಗಳ ದ್ರವ್ಯತೆ ಅಗತ್ಯಗಳಿಗೆ ಆರ್ ಬಿಐ ಕ್ರಮ ಮಾತ್ರ ಸಾಕಾಗುವುದಿಲ್ಲ. ಅದು ಸಮರ್ಪಕ ಕೂಡ ಆಗಿಲ್ಲ. ಶಾಪಿಂಗ್ ಸೆಂಟರ್ ಗಳು ಮೆಟ್ರೊ ನಗರಗಳಲ್ಲಿ ಮತ್ತು ದೊಡ್ಡ ನಗರಗಳಲ್ಲಿ ಮಾತ್ರ ಇದ್ದು ಇಲ್ಲಿ ದೊಡ್ಡ ಡೆವೆಲಪರ್ ಗಳು, ಖಾಸಗಿ ಹೂಡಿಕೆದಾರರು ಮತ್ತು ವಿದೇಶಿ ಹೂಡಿಕೆದಾರರು ಮಾತ್ರ ಹೂಡಿಕೆ ಮಾಡುತ್ತಾರೆ ಎಂಬ ತಪ್ಪು ಅಭಿಪ್ರಾಯವಿದೆ.
ಆದರೆ ಬಹುತೇಕ ಮಾಲ್ ಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಭಾಗವಾಗಿರುತ್ತದೆ ಅಥವಾ ದೇಶದಲ್ಲಿರುವ 650ಕ್ಕೂ ಹೆಚ್ಚು ಶಾಪಿಂಗ್ ಸೆಂಟರ್ ಗಳಲ್ಲಿ 550ಕ್ಕೂ ಹೆಚ್ಚು ಸ್ಟಾಂಡ್ ಅಲೋನ್ ಡೆವೆಲಪರ್ ಗಳ ಒಡೆತನ ಹೊಂದಿದ್ದು ಸಾವಿರಕ್ಕೂ ಹೆಚ್ಚು ಸಣ್ಣ ಶಾಪಿಂಗ್ ಸೆಂಟರ್ ಗಳು ಸಣ್ಣ ನಗರಗಳಲ್ಲಿವೆ, ಇವೆಲ್ಲವೂ ಇಂದು ಉಳಿವಿಗಾಗಿ ಹೋರಾಡುತ್ತಿವೆ ಎಂದು ಶಾಪಿಂಗ್ ಸೆಂಟರ್ ಒಕ್ಕೂಟ ಅಂಕಿಅಂಶ ಹೇಳುತ್ತದೆ.
ಸಂಘಟಿತ ಚಿಲ್ಲರೆ ಉದ್ಯಮವು ಲಾಕ್ ಡೌನ್ ಆದ ನಂತರ ತೀವ್ರ ಸಂಕಷ್ಟದಲ್ಲಿವೆ. ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಇಎಂಐ ಅವಧಿ ವಿಸ್ತರಣೆ ಉದ್ಯಮದ ಮೇಲೆ ಹಣದ ಹರಿವಿಗೆ ಹೆಚ್ಚು ಸಹಾಯ ಮಾಡುವುದಿಲ್ಲ ಎಂದು ಶಾಪಿಂಗ್ ಸೆಂಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅಮಿತಾಬ್ ತನೆಜ ಹೇಳಿದ್ದಾರೆ.
ಈ ವಲಯದ ಪುನಶ್ಚೇತನಕ್ಕೆ ದೀರ್ಘಾವಧಿಯ ಫಲದ ಯೋಜನೆಗಳು ಅಗತ್ಯವಾಗಿದೆ. ಮಾಲ್ ಗಳು ಹೆಚ್ಚು ಸುರಕ್ಷಿತ, ನಿಖರವಾದ, ನಿಯಂತ್ರಿತ ಪರಿಸರದಲ್ಲಿದ್ದರೂ ಕೂಡ ದುರದೃಷ್ಟವಶಾತ್ ಅವುಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿಲ್ಲ. ಇದರಿಂದ ಅನೇಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದ್ದು ಹಲವು ಮಳಿಗೆಗಳು ಮುಚ್ಚುವ ಪರಿಸ್ಥಿತಿ ಉಂಟಾಗಬಹುದು ಎಂದು ತನೆಜ ಆತಂಕ ವ್ಯಕ್ತಪಡಿಸಿದ್ದಾರೆ.