ಬೆಂಗಳೂರು: ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸುಲಭ ಸಂಪರ್ಕಕ್ಕೆ 87 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ಸಿದ್ಧ ಆಗಿದ್ದು, ಅದರ ಜಾರಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚಿಸಲು ಮಹಾನಗರದ ಬಿಜೆಪಿ ಶಾಸಕರು ತೀರ್ಮಾನಿಸಿದ್ದಾರೆ.
ಡಿಸಿಎಂ ಡಾ.ಸಿ.ಎನ್. ಆಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ವಿಕಾಸಸೌಧದ ಅವರ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರ ಸಭೆ ನಡೆಯಿತು. ಯೋಜನೆಯ ನೀಲಿನಕ್ಷೆ ಸಿದ್ಧಪಡಿಸಿರುವ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ನಮ್ಮ ಮೆಟ್ರೊ ಮಾದರಿಯಲ್ಲೇ ಎಲಿವೇಟೆಡ್ ಕಾರಿಡಾರ್ ಅನ್ನೂ ವಿವಿಧ ಹಂತಗಳಲ್ಲಿ ನಿರ್ಮಾಣ ಮಾಡಬೇಕಾಗಿದೆ. ಹೀಗಾಗಿ ಕನಿಷ್ಠ ಮೊದಲ ಹಂತದ ಕಾಮಗಾರಿಗಳಿಗೆ ಈ ಸಲದ ಬಜೆಟ್‍ನಲ್ಲಿ ಆದ್ಯತೆ ಕೊಡಬೇಕು ಎನ್ನುವುದನ್ನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡುವುದಕ್ಕೂ ಒಪ್ಪಿದ್ದಾರೆ.
ಹೌದು, ಒಟ್ಟಾರೆ 87 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಗೆ ಅಂದಾಜು 26 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಒಮ್ಮೆಗೇ ಇಷ್ಟು ಹಣ ಹೊಂದಿಸುವುದು ಕಷ್ಟ ಆಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಕನಿಷ್ಠ ಪೂರ್ವ ಪಶ್ಚಿಮ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಒದಗಿಸುವುದಕ್ಕೆ ಮನವಿ ಮಾಡಲು ಶಾಸಕರು ನಿರ್ಧರಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಪ್ರಥಮ ಹಂತದ ಈ ಕಾಮಗಾರಿಗೆ ಒಟ್ಟು 9,300ಕೋಟಿ ರೂ ಅವಶ್ಯವಾಗಿದೆ. ಇದು ಕೆ.ಆರ್.ಪುರದಿಂದ ಅಲಸೂರು, ಕಂಟೋನ್ಮೆಂಟ್, ಮೇಖ್ರಿ ಸರ್ಕಲ್ ಮೂಲಕ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸಲಿದೆ. 29 ಕಿ.ಮೀ ಉದ್ದದ ಈ ಮಾರ್ಗವು ಆರು ಪಥದಲ್ಲಿ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಸಭೆಯ ಗಮನಕ್ಕೆ ತಂದರು. ಇದರ ನಂತರ ಮತ್ತೂ ಮೂರು ಹಂತಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುವುದು. ಅಂದಾಜು ಮುಂದಿನ 10 ವರ್ಷಗಳ ಕಾಲ ಕಾಮಗಾರಿ ನಡೆಯಲಿದೆ. ಎಲಿವೇಟೆಡ್ ಕಾರಿಡಾರ್, ಕೆಲವು ಕಡೆ ಬಹು ಅಂತಸ್ತಿನಲ್ಲಿ ಇರುತ್ತದೆ. ಭೂಸ್ವಾಧೀನಕ್ಕೇ ಅಂದಾಜು 10 ಸಾವಿರ ಕೋಟಿ ಅವಶ್ಯವಿದೆ ಎಂದಿದ್ದಾರೆ ಡಿಸಿಎಂ ಡಾ.ಅಶ್ವಥ್ ನಾರಾಯಣ್.