ಬೆಂಗಳೂರು : ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ನಡೆಯುವುದು ಬೆಳಗಾವಿಯ ಸುವರ್ಣ ಸೌಧದಲ್ಲಿ. ಆದರೆ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕೃತ ಘೋಷಣೆ ಹೊರಡಿಸಿರುವುದು ಆಶ್ಚರ್ಯ ತಂದಿದೆ. ಮೊದಲೇ ಪ್ರವಾಹದಿಂದ ತತ್ತರಿಸಿದ ಉತ್ತರ ಕರ್ನಾಟಕಕ್ಕೆ ಅಧಿವೇಶನ ದಲ್ಲಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಅಧಿವೇಶನ ಮಹಾನಗರ ಬೆಂಗಳೂರಿಗೆ ಸ್ಥಳಾಂತರ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆದರೆ ಇದಕ್ಕೆ ಸೂಕ್ತ ಕಾರಣವಿದೆ ಎಂದು ತಿಳಿಸಿದ್ದಾರೆ. ಅದೇನೆಂದರೆ ಪ್ರವಾಹ ಕಾರಣಕ್ಕಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಬೇಕಾಗಿದ್ದ ಈ ಬಾರಿಯ ಚಳಿಗಾಲದ ಅಧಿವೇಶನನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
ಇದೇ ವರ್ಷದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಳಗಾವಿ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕವು ಭೀಕರ ಪ್ರವಾಹ ಎದುರಾಗಿತ್ತು. ಈ ಪ್ರವಾಹದಿಂದ ಜನ, ಜಾನುವಾರುಗಳು ತತ್ತರಿಸಿ ಹೋಗಿದ್ದು, ಬಹುತೇಕರು ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡಿದ್ದರು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಉತ್ತರ ಕರ್ನಾಟಕದ ಸುಮಾರು 70 ಸಾವಿರಕ್ಕಿಂತಲೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆಯುಂಟಾಗಿದೆ. ಹಾಗಾಗಿ ಈ ಬಾರಿಯು ಚಳಿಗಾಲದ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಪ್ರವಾಹ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಕೆಲಸದಲ್ಲಿ ನಿರತರಾಗಿರುವ ವಿಭಾಗ ಮಟ್ಟದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯು ಅಧಿವೇಶನದ ಪೂರಕ ಕೆಲಸ ಕಾರ್ಯಗಳಲ್ಲಿ ತೊಡಗುವುದರಿಂದ ಸಂಕಷ್ಟಕ್ಕೀಡಾದ ಜನರಿಗೆ ಪರಿಹಾರ ಕಾರ್ಯಾಚರಣೆಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸರ್ಕಾರವೇನೊ ಕಾರಣ ನೀಡಿ, ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದೆ, ಆದರೆ ಅಲ್ಲಿಯ ಅಭಿವೃದ್ಧಿ ಮತ್ತು ನೆರೆ ಪರಿಸ್ಥಿತಿಯನ್ನು ಸಹ ಅವಲೋಕಿಸಿ, ಉತ್ತರ ಪರಿಹಾರ ವಾಸ್ತವ ರೂಪದಲ್ಲಿ ತರಬೇಕಲ್ಲವೇ?! ಜನರು ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದು ಕಾಲವೇ ಉತ್ತರಿಸಬೇಕಿದೆ.