ಪಾಕಿಸ್ತಾನದ ಮೇಲೆ ಚೀನಾ ಹೇರಿರುವ ಒತ್ತಡ ಏನು ಗೊತ್ತಾ..?

Soma shekhar

ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಗ್ರಗಾಮಿಗಳಿಗೆ ಪೂರೈಸಿ ಶಾಂತಿ ಕದಡಲು ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿರುವ ಚೀನಾದ ಮತ್ತೊಂದು ಆಘಾತಕಾರಿ ಕುತಂತ್ರ ಬಹಿರಂಗಗೊಂಡಿದೆ. ಭಾರತಕ್ಕೆ ಸೇರಬೇಕಾಗಿರುವ ಪ್ರದೇಶವಾದ ಗಿಲ್ಗಿಟ್-ಬಲ್ಟಿಸ್ತಾನ್‍ಗಳನ್ನು(ಜಿ-ಬಿ ರೀಜನ್) ದೇಶದ ಮುಖ್ಯ ಪ್ರದೇಶದಲ್ಲಿ ವಿಲೀನಗೊಳಿಸುವಂತೆ ಪಾಕಿಸ್ತಾನದ ಮೇಲೆ ಚೀನಾ ಭಾರೀ ಒತ್ತಡ ಹೇರುತ್ತಿದೆ. ಇದು ಭಾರತಕ್ಕೆ ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ.

ಭಾರತದ ವಿರುದ್ಧ ಏಷ್ಯಾದ ಈ ಎರಡು ಪ್ರಬಲ ವೈರಿ ದೇಶಗಳು ಸದಾ ಹಗೆತನದ ವಿಷ ಕಾರುತ್ತಿದ್ದು, ಈಗ ಗಿಲ್ಗಿಟ್-ಬಲ್ಟಿಸ್ತಾನ್ ಪ್ರದೇಶಗಳ ವಿಷಯದಲ್ಲಿ ಮತ್ತೆ ದೊಡ್ಡ ಕ್ಯಾತೆ ತೆಗೆಯಲು ಸಜ್ಜಾಗಿವೆ.ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ತ್ವರಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಜಿ-ಬಿ ಪ್ರಾಂತ್ಯಗಳನ್ನು ಪಾಕ್‍ನ ಮುಖ್ಯ ಪ್ರದೇಶದೊಳಗೆ ವಿಲೀನ ಮಾಡುವುದು ಅನಿವಾರ್ಯವಾಗಿದೆ ಎಂದು ಕಮ್ಯೂನಿಸ್ಟ್ ರಾಷ್ಟ್ರವು ಇಸ್ಲಾಂ ದೇಶಕ್ಕೆ ದುರ್ಬೋಧನೆ ಮಾಡಿದೆ.

ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪದೇ ಪದೇ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ ಈಗ ಚೀನಾದ ಈ ಒತ್ತಡದಿಂದ ಮತ್ತಷ್ಟು ಪ್ರಲೋಭನೆಗೊಂಡಿದೆ.  ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ಟಿಸ್ತಾನ್ ವ್ಯವಹಾರಗಳ ಸಚಿವ ಅಲಿ ಅಮಿನ್ ಗಂಡಾಪುರ್ ನೀಡಿರುವ ಹೇಳಿಕೆಯೊಂದು ಇದಕ್ಕೆ ಪುಷ್ಟಿ ನೀಡಿದೆ.ಜಿ-ಬಿ ಸ್ಥಾನಮಾನಗಳನ್ನು ಸಂಪೂರ್ಣವಾಗಿ ಬದಲಿಸಿ ಅದನ್ನು ಪೂರ್ಣಪ್ರಮಾಣದ ಪ್ರಾಂತ್ಯವನ್ನಾಗಿ ಮಾಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಸದ್ಯದಲ್ಲೇ ಈ ಪ್ರದೇಶಗಳಿಗೆ ತೆರಳಿ ಈ ಬಗ್ಗೆ ಅಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿ-ಬಿ ಪ್ರದೇಶಗಳನ್ನು ಪಾಕಿಸ್ತಾನದ ಮುಖ್ಯ ಪ್ರದೇಶಕ್ಕೆ ಸೇರಿಸಬೇಕೆಂದು ಚೀನಾ ಒತ್ತಡ ಹೇರುತ್ತಿರುವುದು ಭಾರತಕ್ಕೆ ಮತ್ತೊಂದು ಆತಂಕದ ಸಂಗತಿಯಾಗಿದೆ. ಗಿಲ್ಗಿಟ್-ಬಲ್ಟಿಸ್ತಾನ್ ಏಷ್ಯಾದ ಅತ್ಯಂತ ಪ್ರಮುಖ ಭಾಗ. ಇದು ಈ ಖಂಡದ ಮೂರು ಅಣ್ವಸ್ತ್ರ ಶಕ್ತಿಶಾಲಿ ದೇಶಗಳಾದ ಭಾರತ, ಚೀನಾ ಮತ್ತು ಪಾಕಿಸ್ತಾನಕ್ಕೆ ಅತ್ಯಂತ ಮುಖ್ಯ ಪ್ರದೇಶವಾಗಿದೆ.ಚೀನಾ ಈಗಾಗಲೇ ಈ ಪ್ರಾಂತ್ಯದಲ್ಲಿರುವ ಅತ್ಯಂತ ಅಮೂಲ್ಯ ಖನಿಜ ಸಂಪತ್ತನ್ನು ಲೂಟಿ ಮಾಡಿದೆ. ಸಿಪಿಇಸಿ ಯೋಜನೆ ನೆಪದಲ್ಲಿ ಚೀನಾ ಮತ್ತು ಪಾಕ್ ಈ ಪ್ರದೇಶದಲ್ಲಿ ಅಭಿವೃದ್ದಿ ಕಾಮಗಾರಿಗಳ ಮೂಲಕ ಪರಿಸರವನ್ನು ಹಾಳು ಮಾಡಿವೆ.

ವಾಸ್ತವವಾಗಿ ಭಾರತಕ್ಕೆ ಸೇರಬೇಕಾದ ಜಿ-ಬಿ ಪ್ರದೇಶಗಳನ್ನು ಕಬಳಿಸಲು ಪಾಕಿಸ್ತಾನ ನಡೆಸುತ್ತಿರುವ ಹುನ್ನಾರಕ್ಕೆ ಅದರ ಪರಮಾಪ್ತ ಮಿತ್ರ ದೇಶ ಚೀನಾ ಕುಮ್ಮಕ್ಕು ನೀಡುತ್ತಿರುವುದು ಆಘಾತಕಾರಿ ವಿದ್ಯಮಾನವಾಗಿದೆ.  Find Out More:

Related Articles: